ಪವಾಡ ಅಂದ್ರೆ ಇದು! ಸತ್ತಿದ್ದಾಳೆಂದು ಆಸ್ಪತ್ರೆಯಿಂದ ಮನೆಗೆ ತರುವಾಗ ರಸ್ತೆ ಮಧ್ಯೆ ಎದ್ದುಕೂತ ಮಹಿಳೆ..!

Author:



ಸಾಮಾನ್ಯವಾಗಿ ರಸ್ತೆಗಳಲ್ಲಿರುವ ಗುಂಡಿಗಳು ಅಪಘಾತಗಳಿಗೆ ಕಾರಣವಾಗಿ ಜನರ ಪ್ರಾಣವನ್ನು ಬಲಿಪಡೆಯುತ್ತವೆ. ಆದರೆ, ಇಲ್ಲೊಂದು ಅಪರೂಪದ ಘಟನೆ ನಡೆದಿದ್ದು ರಸ್ತೆಯಲ್ಲಿದ್ದ ದೊಡ್ಡ ಗುಂಡಿಯೊಂದು ಸಾವಿನ ಮನೆಯತ್ತ ಸಾಗುತ್ತಿದ್ದ ಮಹಿಳೆಗೆ ಮರುಜೀವ ನೀಡಿದೆ! ಈ ಅಚ್ಚರಿಯ ಘಟನೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯಲ್ಲಿ ನಡೆದಿದ್ದು, ಸ್ಥಳೀಯವಾಗಿ ಭಾರಿ ಚರ್ಚೆಗೆ ಕಾರಣವಾಗಿದೆ.

ಏನಿದು ಘಟನೆ?

ಏಲೂರು ಜಿಲ್ಲೆಯ ಕೈಕಲೂರು ಮಂಡಲದ ಭುಜಬಲಪಟ್ನಂ ಗ್ರಾಮದ ಮಾಜಿ ಮಹಿಳಾ ಸರಪಂಚ್ ಗುರಜಾಲ ರಾಮತುಳಸಿ (48) ಅವರು ಕಳೆದ ಕೆಲವು ಸಮಯದಿಂದ ತೀವ್ರ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ಕುಟುಂಬಸ್ಥರು ಅವರನ್ನು ಏಲೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಅವರ ದೇಹ ಸ್ಪಂದಿಸಲಿಲ್ಲ. ವೈದ್ಯರು ವೆಂಟಿಲೇಟರ್ ಮೇಲಿಟ್ಟು ಸಿಪಿಆರ್ (CPR) ನೀಡಿದರೂ ಯಾವುದೇ ಫಲ ನೀಡಲಿಲ್ಲ. ಅವರ ಪಲ್ಸ್ ಸಂಪೂರ್ಣವಾಗಿ ಬಿದ್ದುಹೋಗಿದ್ದರಿಂದ ರಾಮತುಳಸಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಅಧಿಕೃತವಾಗಿ ಘೋಷಿಸಿದರು. ಇದರಿಂದಾಗಿ ಇಡೀ ಕುಟುಂಬ ತೀವ್ರ ಕಣ್ಣೀರಿನಲ್ಲಿ ಮುಳುಗಿತು. ಬಂಧುಗಳು ಮತ್ತು ಸ್ಥಳೀಯ ನಾಯಕರು ರಾಮತುಳಸಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಲು ಆರಂಭಿಸಿದರು.

ಆಂಬುಲೆನ್ಸ್ ಚಲಿಸುವಾಗ ನಡೆದ ಪವಾಡ!

ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ನಂತರ ಕುಟುಂಬಸ್ಥರು ಅಂತಿಮ ಸಂಸ್ಕಾರಕ್ಕಾಗಿ ರಾಮತುಳಸಿ ಅವರ ದೇಹವನ್ನು ಆಂಬುಲೆನ್ಸ್ ಮೂಲಕ ಸ್ವಗ್ರಾಮಕ್ಕೆ ತರುತ್ತಿದ್ದರು. ಆಂಬುಲೆನ್ಸ್ ಮಂಡವಳ್ಳಿ ಮಂಡಲದ ಪುಲಪರ್ರು ಎಂಬ ಗ್ರಾಮದ ಬಳಿ ಸಾಗುತ್ತಿದ್ದಾಗ, ಹಠಾತ್ತನೆ ಬೈಕ್ ಒಂದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಆಂಬುಲೆನ್ಸ್ ಚಾಲಕ ವಾಹನವನ್ನು ಪಕ್ಕಕ್ಕೆ ತಿರುಗಿಸಿದ್ದಾನೆ. ಈ ಸಂದರ್ಭದಲ್ಲಿ ಆಂಬುಲೆನ್ಸ್ ರಸ್ತೆ ಮಧ್ಯದಲ್ಲಿದ್ದ ಒಂದು ದೊಡ್ಡ ಗುಂಡಿಗೆ ಬಿದ್ದು, ಭಾರಿ ಪ್ರಮಾಣದಲ್ಲಿ ಕುಲುಕಾಡಿತು. ಈ ಜೋರಾದ ಕುಲುಕಾಟ ಮತ್ತು ನೂಕುವಿಕೆಯ ಪ್ರಭಾವದಿಂದಾಗಿ ರಾಮತುಳಸಿ ಅವರ ದೇಹದಲ್ಲಿ ಹಠಾತ್ತನೆ ಚಲನೆ ಕಂಡುಬಂದಿದೆ! ಇದನ್ನು ಗಮನಿಸಿದ ಅವರ ಕುಟುಂಬದವರು ತಕ್ಷಣವೇ ದಿಗ್ಭ್ರಮೆಗೊಂಡು ಪರಿಶೀಲಿಸಿದಾಗ ಆಕೆ ನಿಧಾನವಾಗಿ ಉಸಿರಾಡುತ್ತಿರುವುದು ಪತ್ತೆಯಾಗಿದೆ.

ಪ್ರಸ್ತುತ ಆರೋಗ್ಯ ಸ್ಥಿತಿ

ಅವರಲ್ಲಿ ಜೀವವಿರುವುದನ್ನು ಕಂಡು ತಕ್ಷಣವೇ ಅಲರ್ಟ್ ಆದ ಕುಟುಂಬ ಸದಸ್ಯರು ಸಮೀಪದ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಏಲೂರಿನ ರಿಮ್ಸ್‌ ಆಸ್ಪತ್ರೆಗೆ ಮತ್ತು ನಂತರ ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ವಿಜಯವಾಡ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಮತುಳಸಿ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕೊನೆಯುಸಿರೆಳೆದಿದ್ದಾರೆ ಎಂದು ಅಂತಿಮ ಸಂಸ್ಕಾರಕ್ಕೆ ತಂದಿದ್ದ ಮಗಳು ಮರಳಿ ಬದುಕಿ ಬಂದಿದ್ದನ್ನು ಕಂಡು ಕುಟುಂಬಸ್ಥರ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ರಸ್ತೆ ಗುಂಡಿಯಿಂದಾಗಿ ಮಹಿಳೆಯೊಬ್ಬರು ಪುನರ್ಜನ್ಮ ಪಡೆದ ಈ ವಿಶಿಷ್ಟ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.



Movie News