‘ಆ ನಟಿಯ ಮೃತದೇಹ ನೋಡಿದಾಗ ತಲೆ ಇರಲಿಲ್ಲ; ಜೀವನ ಅಂದರೆ ಇಷ್ಟೇನಾ ಅನಿಸಿತು’: ನಟಿ ಪ್ರೇಮಾ ಭಾವುಕ ನೆನಪು

Author:



ನಟಿ ಪ್ರೇಮಾ ಕನ್ನಡ ಹಾಗೂ ತೆಲುಗು ಚಿತ್ರರಂಗದ ಪ್ರೇಕ್ಷಕರಿಗೆ ಚಿರಪರಿಚಿತ ಹೆಸರು. ಒಂದು ಕಾಲದಲ್ಲಿ ನಾಯಕಿಯಾಗಿ ಬಹುಬೇಡಿಕೆಯಲ್ಲಿದ್ದ ಅವರು, ಸದ್ಯ ಸಿನಿಮಾಗಳ ಸಂಖ್ಯೆಯನ್ನು ಕೊಂಚ ಕಡಿಮೆ ಮಾಡಿದ್ದಾರೆ. ಈ ನಡುವೆ ತಮ್ಮ ವೃತ್ತಿಜೀವನದ ಆರಂಭದ ದಿನಗಳು, ಚಿತ್ರರಂಗದಲ್ಲಿ ಎದುರಿಸಿದ ಸವಾಲುಗಳು ಹಾಗೂ ಹಿರಿಯ ನಟ ವಿಷ್ಣುವರ್ಧನ್‌ ಅವರೊಂದಿಗೆ ಕೆಲಸ ಮಾಡಿದ ಅನುಭವಗಳ ಬಗ್ಗೆ ಅವರು ಮಾತನಾಡಿದ್ದಾರೆ. ಇದೇ ವೇಳೆ, ತಮ್ಮ ಆತ್ಮೀಯ ಗೆಳತಿಯಾಗಿದ್ದ ದಿವಂಗತ ನಟಿ ಸೌಂದರ್ಯ ಅವರೊಂದಿಗಿನ ಒಡನಾಟ, ಅವರ ವ್ಯಕ್ತಿತ್ವ, ಚಿತ್ರರಂಗದ ಮೇಲಿನ ಪ್ರಭಾವ ಹಾಗೂ ಅವರ ಅಕಾಲಿಕ ನಿಧನದ ಕಹಿ ನೆನಪುಗಳನ್ನು ಪ್ರೇಮಾ ಭಾವುಕವಾಗಿ ಹಂಚಿಕೊಂಡಿದ್ದಾರೆ.

ಸೌಂದರ್ಯ ಜೊತೆ ಸ್ಪರ್ಧೆ ಅನ್ನೋ ಭಾವನೆ ಇರಲಿಲ್ಲ

ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಸೌಂದರ್ಯ, ರಾಶಿ ಸೇರಿದಂತೆ ಹಲವು ನಾಯಕಿಯರು ಅಗ್ರಸ್ಥಾನದಲ್ಲಿದ್ದರು. ಆದರೆ ಸೌಂದರ್ಯ ಅವರೊಂದಿಗೆ ತಾನು ಎಂದಿಗೂ ಸ್ಪರ್ಧೆ ಮಾಡಬೇಕು ಎಂಬ ಭಾವನೆ ಹೊಂದಿರಲಿಲ್ಲ ಎಂದು ಪ್ರೇಮಾ ಹೇಳಿದ್ದಾರೆ. ಕನ್ನಡದಲ್ಲಿ ಸೌಂದರ್ಯ ಕಡಿಮೆ ಸಿನಿಮಾಗಳಲ್ಲಿ ನಟಿಸಿದ್ದರೂ, ತೆಲುಗಿನಲ್ಲಿ ಹೆಚ್ಚಿನ ಸಿನಿಮಾಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಹೀಗಾಗಿ ಅವರು ತೆಲುಗು ಪ್ರೇಕ್ಷಕರಿಗೆ ಕೂಡ ತಮ್ಮ ಮನೆಯ ಹುಡುಗಿಯಂತೆಯೇ ಕಾಣುತ್ತಿದ್ದರು ಎಂದು ಪ್ರೇಮಾ ನೆನಪಿಸಿಕೊಂಡಿದ್ದಾರೆ.

ಸೌಂದರ್ಯ ಅವರ ಮುಖದಲ್ಲಿ ಇದ್ದ ಸಹಜ ಸೌಂದರ್ಯವನ್ನು ಮಹಾನಟಿ ಸಾವಿತ್ರಿ ಅವರೊಂದಿಗೆ ಹೋಲಿಸಿರುವ ಪ್ರೇಮಾ, ಸೌಂದರ್ಯ ಅವರ ಜೀವನದ ಕುರಿತು ಬಯೋಪಿಕ್‌ ಯಾಕೆ ಇನ್ನೂ ಬಂದಿಲ್ಲ ಎಂಬುದಕ್ಕೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಸಾವಿತ್ರಿ ಅವರ ಜೀವನದ ಮೇಲೆ ಬಯೋಪಿಕ್‌ ಬಂದಿರುವಂತೆ, ಸೌಂದರ್ಯ ಅವರಂತಹ ಅದ್ಭುತ ನಟಿಯ ಜೀವನದ ಮೇಲೂ ಸಿನಿಮಾ ಬರಬೇಕು. ಅವರ ಬಯೋಪಿಕ್‌ ಮಾಡಿದರೆ ಅದು ಖಂಡಿತ ದೊಡ್ಡ ಯಶಸ್ಸು ಕಾಣುತ್ತದೆ” ಎಂಬ ಅಭಿಪ್ರಾಯವನ್ನು ಪ್ರೇಮಾ ವ್ಯಕ್ತಪಡಿಸಿದ್ದಾರೆ.

ಸೌಂದರ್ಯ ಜೊತೆಗಿನ ಸ್ನೇಹವನ್ನು ನೆನೆದ ಪ್ರೇಮಾ

ಸೌಂದರ್ಯ ಮತ್ತು ತಮ್ಮ ನಡುವಿನ ಸ್ನೇಹ ಬಹಳ ಆತ್ಮೀಯವಾಗಿತ್ತು ಎಂದು ಪ್ರೇಮಾ ಹೇಳಿದ್ದಾರೆ. ವರ್ಷಗಳು ಕಳೆದರೂ ಸೌಂದರ್ಯ ಅವರ ನೆನಪುಗಳು ತಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದಿವೆ ಎಂದಿದ್ದಾರೆ. ವಿಶೇಷವಾಗಿ ಸೌಂದರ್ಯ ಅವರ ಕಣ್ಣುಗಳು ಹಾಗೂ ಮಾತನಾಡುವ ರೀತಿ ತಮಗೆ ತುಂಬಾ ಇಷ್ಟವಾಗುತ್ತಿತ್ತು ಎಂದು ಪ್ರೇಮಾ ನೆನಪಿಸಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾಗಿ ತಿಳಿಸಿದ್ದಾರೆ. ಸೌಂದರ್ಯ ಅವರಿಗೆ ರಾಜಕೀಯದಲ್ಲೂ ಆಸಕ್ತಿ ಇತ್ತು. ಒಂದು ಸಂದರ್ಭದಲ್ಲಿ ತಾವು ಚುನಾವಣಾ ಪ್ರಚಾರಕ್ಕೆ ಬರಬೇಕು ಎಂದು ಸೌಂದರ್ಯ ಕೇಳಿಕೊಂಡಿದ್ದರು. ಆದರೆ ತನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದ್ದಾಗಿ ಪ್ರೇಮಾ ತಿಳಿಸಿದ್ದಾರೆ.

ತೆರೆಯ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲೂ ಸೌಂದರ್ಯ ಸರಳ

ಸೌಂದರ್ಯ ಸಿನಿಮಾಗಳಲ್ಲಿ ಎಷ್ಟು ಸಹಜವಾಗಿ, ಹೋಮ್ಲಿಯಾಗಿ ಕಾಣಿಸಿಕೊಳ್ಳುತ್ತಿದ್ದರೋ, ನಿಜ ಜೀವನದಲ್ಲೂ ಅಷ್ಟೇ ಸರಳ ವ್ಯಕ್ತಿಯಾಗಿದ್ದರು ಎಂದು ಪ್ರೇಮಾ ಹೇಳಿದ್ದಾರೆ. ಅದೇ ಸಮಯದಲ್ಲಿ ಮೇಕಪ್‌ ಹಾಗೂ ಹೇರ್‌ಸ್ಟೈಲ್‌ ವಿಚಾರದಲ್ಲಿ ಅವರು ಬಹಳ ಪರ್ಫೆಕ್ಷನಿಸ್ಟ್‌ ಆಗಿದ್ದರು. ಪ್ರತಿ ಶಾಟ್‌ ಮುಗಿದ ನಂತರವೂ ಕನ್ನಡಿಯಲ್ಲಿ ತಮ್ಮನ್ನು ತಾವು ಪರಿಶೀಲಿಸಿಕೊಳ್ಳುತ್ತಿದ್ದರು ಎಂದು ಪ್ರೇಮಾ ನೆನಪಿಸಿಕೊಂಡಿದ್ದಾರೆ. ಗ್ಲಾಮರ್‌ ಪ್ರದರ್ಶನವಿಲ್ಲದೆಯೂ ಒಬ್ಬ ನಟಿ ಸ್ಟಾರ್‌ ಹೀರೋಯಿನ್‌ ಆಗಿ ಗುರುತಿಸಿಕೊಳ್ಳಬಹುದು ಎಂಬುದನ್ನು ಸೌಂದರ್ಯ ಸಾಬೀತುಪಡಿಸಿದ್ದರು. ಕೇವಲ ಮುಖಭಾವ ಮತ್ತು ಸಹಜ ಅಭಿನಯದಿಂದಲೇ ಪ್ರೇಕ್ಷಕರ ಮನ ಗೆಲ್ಲಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದರು ಎಂದು ಪ್ರೇಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ತುಪ್ಪ ಹಾಕಿದ ಬೇಳೆ ತಿನ್ನುವುದನ್ನು ಸೌಂದರ್ಯ ಅವರಿಂದಲೇ ಕಲಿತೆ’

ಸೌಂದರ್ಯ ಅವರ ಆಹಾರ ಪದ್ಧತಿಯ ಬಗ್ಗೆಯೂ ಪ್ರೇಮಾ ಕೆಲವು ಆಸಕ್ತಿದಾಯಕ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಸೌಂದರ್ಯ ತುಂಬಾ ಕಡಿಮೆ ಆಹಾರ ಸೇವಿಸುತ್ತಿದ್ದರು. ತಾವು ಕೂಡ ಅವರ ಜೊತೆಗಿದ್ದಾಗ ಹಲವು ವಿಷಯಗಳನ್ನು ಗಮನಿಸುತ್ತಿದ್ದೆ. ಅದರಲ್ಲೂ ತುಪ್ಪ ಹಾಕಿದ ಬೇಳೆ ತಿನ್ನುವುದನ್ನು ಸೌಂದರ್ಯ ಅವರಿಂದಲೇ ಕಲಿತೆ ಎಂದು ಪ್ರೇಮಾ ಹೇಳಿದ್ದಾರೆ.

‘ಅವರ ಮೃತದೇಹ ನೋಡಿದಾಗ ತಲೆ ಇರಲಿಲ್ಲ…’

ಸೌಂದರ್ಯ ಅವರ ಅಕಾಲಿಕ ನಿಧನದ ವಿಚಾರವನ್ನು ನೆನಪಿಸಿಕೊಂಡಾಗ ಪ್ರೇಮಾ ಭಾವುಕರಾಗಿದ್ದಾರೆ. ಸೌಂದರ್ಯ ಮೃತಪಟ್ಟ ಬಳಿಕ ಅವರ ಮೃತದೇಹವನ್ನು ನೋಡಲು ಹೋದಾಗ, ಬಾಕ್ಸ್‌ನಲ್ಲಿ ದೇಹವನ್ನು ಇಡಲಾಗಿತ್ತು. ಆದರೆ ತಲೆ ಇರಲಿಲ್ಲ. ಆ ದೃಶ್ಯವನ್ನು ನೋಡಿದಾಗ ತಮಗೆ ತುಂಬಾ ಆಘಾತವಾಗಿತ್ತು ಎಂದು ಪ್ರೇಮಾ ಹೇಳಿದ್ದಾರೆ. ಅದರ ಜೊತೆಗೆ ಸೌಂದರ್ಯ ಅವರ ತಾಯಿಯ ನೋವನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ. “ಆ ದಿನ ಜೀವನದ ಬಗ್ಗೆ ಒಂದು ದೊಡ್ಡ ಸತ್ಯ ಅರ್ಥವಾಯಿತು. ಎಷ್ಟೇ ಹೆಸರು, ಖ್ಯಾತಿ, ಸ್ಟಾರ್‌ ವಾಲ್ಯೂ ಇದ್ದರೂ ಕೊನೆಗೆ ಎಲ್ಲವನ್ನೂ ಇಲ್ಲಿಯೇ ಬಿಟ್ಟು ಹೋಗಬೇಕು. ನಮ್ಮೊಂದಿಗೆ ಹೋಗುವುದು ನಮ್ಮ ಕರ್ಮ ಮತ್ತು ನಾವು ಗಳಿಸಿದ ಗೌರವ ಮಾತ್ರ” ಎಂಬ ಅರ್ಥದಲ್ಲಿ ಪ್ರೇಮಾ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಸೌಂದರ್ಯ ಕುಟುಂಬದ ಬಗ್ಗೆ ಪ್ರೇಮಾ ಹೇಳಿದ್ದೇನು?

ಸೌಂದರ್ಯ ಅವರ ನಿಧನದ ಬಳಿಕ ಅವರ ತಾಯಿಯೂ ಎರಡು ವರ್ಷಗಳ ಹಿಂದೆ ನಿಧನರಾಗಿದ್ದಾರೆ ಎಂದು ಪ್ರೇಮಾ ತಿಳಿಸಿದ್ದಾರೆ. ಅವರು ಬೆಂಗಳೂರಿನ ಆರ್‌.ಟಿ. ನಗರದ ನಿವಾಸದಲ್ಲಿ ವಾಸಿಸುತ್ತಿದ್ದರು ಎಂದು ಹೇಳಿದ್ದಾರೆ. ಸೌಂದರ್ಯ ಅವರ ಪತಿ ರಘು, ಅಂದರೆ ರಘುನಾಥ್‌, ಸದ್ಯ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರೇಮಾ ಹೇಳಿದ್ದಾರೆ. ಅವರು ಮರುಮದುವೆಯಾಗಿದ್ದು, ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿದ್ದಾರೆ ಎಂಬ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ಇನ್ನು ಸೌಂದರ್ಯ ಅವರ ಅಕಾಲಿಕ ನಿಧನಕ್ಕೆ ವರ್ಷಗಳು ಕಳೆದರೂ, ಅವರ ನೆನಪುಗಳು ಮಾತ್ರ ತಮ್ಮ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿವೆ ಎಂದು ನಟಿ ಪ್ರೇಮಾ ಭಾವುಕವಾಗಿ ಹೇಳಿದ್ದಾರೆ.



Movie News