
ಮೈಸೂರು(ಜು.28): ನನಗೆ ನನ್ನ ತಂದೆಯ ಆರೋಗ್ಯ, ವಿಶ್ರಾಂತಿ ಜೀವನ ಬಹಳ ಮುಖ್ಯ ಎಂದಿರುವ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ ಅವರು, ತಮ್ಮ ತಂದೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚುನಾವಣೆ ನಿವೃತ್ತಿ ಬಗ್ಗೆ ಮಾತನಾಡಿರುವುದಕ್ಕೆ ಪ್ರತಿಕ್ರಯಿಸಿ, ‘ನಾನೊಬ್ಬ ಮಗನಾಗಿ ನಮ್ಮ ತಂದೆಯನ್ನು ಈ ವಿಚಾರದಲ್ಲಿ ಕನ್ವಿನ್ಸ್ (ಮನವೊಲಿಕೆ) ಮಾಡುವುದಿಲ್ಲ’ ಎಂದಿದ್ದಾರೆ. ‘ನಮ್ಮ ತಂದೆಗೆ ಈಗ 80 ವಯಸ್ಸು. ಅವರು ಈಗ ವಿಶ್ರಾಂತಿಯಲ್ಲಿರಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು. ಇಂತಹ ವಯಸ್ಸಿನಲ್ಲಿ ಮತ್ತೆ ಚುನಾವಣೆಗೆ ನಿಲ್ಲಿ ಎಂದು ನಾನೊಬ್ಬ ಮಗನಾಗಿ ಹೇಳಲು ಇಷ್ಟಪಡುವುದಿಲ್ಲ. ನನ್ನ ತಂದೆ ಒಂದು ಬಾರಿ ಹೇಳಿದರೆ ಮುಗಿದು ಹೋಯ್ತು. ಅವರು ಮತ್ತೆ ಆ ವಿಚಾರದಲ್ಲಿ ತಮ್ಮ ನಿರ್ಧಾರ ಬದಲಾಯಿಸುವುದಿಲ್ಲ’ ಎಂದರು.
ಅವರು ಮೊದಲೇ ಹೇಳಿದ್ದರು, ನಾನು ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ ಎಂದು, ಅದನ್ನ ಮತ್ತೆ ಈಗ ಹೇಳಿದ್ದಾರೆ’ ಎಂದರು.
ಸಿದ್ದರಾಮಯ್ಯ ನಿರ್ಧಾರ ಸರಿ ಇದೆ: ಹರಿಪ್ರಸಾದ್
ಬೆಂಗಳೂರು: \Bಮಾಜಿ ಸಿಎಂ ಸಿದ್ದರಾಮಯ್ಯ ಹೇಳಿರುವುದು ಸತ್ಯ. ಹಣ ಬಲ, ತೋಳ್ಬಲ ಜತೆಗೆ ಕಪ್ಪು ಹಣದ ಪ್ರಭಾವದಿಂದ ರಾಜಕೀಯ ಕಲುಷಿತವಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದು ಅಥವಾ ಸ್ಪರ್ಧಿಸದಿರುವ ಬಗ್ಗೆ ನನಗೆ ತಿಳಿದಿಲ್ಲ. ಅದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಆದರೆ ಅವರು ಹೇಳಿದಂತೆ ದೇಶದಲ್ಲಿ ರಾಜಕೀಯ ಕಲುಷಿತಗೊಂಡಿರುವುದು ನಿಜ. ರಾಜಕೀಯವು ಹಣ ಮತ್ತು ತೋಳ್ಬಲದಿಂದ ನಡೆಯುತ್ತಿದ್ದು, 90ರ ದಶಕದಲ್ಲಿನ ಸ್ಥಿತಿ ಈಗ ಇಲ್ಲ’ ಹದಗೆಡುತ್ತಿರುವ ರಾಜಕೀಯ ವಾತಾವರಣದ ಕುರಿತು ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯನ್ನು ಬೆಂಬಲಿಸುತ್ತೇನೆ ಎಂದು ಹರಿಪ್ರಸಾದ್ ಹೇಳಿದರು.
ಅಧಿಕಾರವನ್ನು ಉಳಿಸಿಕೊಳ್ಳಲು ಜನರು ಹಣ, ಧರ್ಮ, ಜಾತಿ ಅಥವಾ ಭಾಷೆಯನ್ನು ಬಳಸುತ್ತಿದ್ದಾರೆ. ದೇಶದಲ್ಲಿ ಮತ್ತು ವಿಶೇಷವಾಗಿ ಕರ್ನಾಟಕದಲ್ಲಿ ಈ ಸ್ಥಿತಿ ಇರುವುದು ತುಂಬಾ ದುರದೃಷ್ಟಕರ ಎಂದು ಅವರು ಹೇಳಿದರು.
ಅವರು ಜನರಿಂದ ದೂರವಾಗಲ್ಲ:
ಸಿದ್ದರಾಮಯ್ಯ ಅವರ ಭವಿಷ್ಯದ ರಾಜಕೀಯ ಪಾತ್ರದ ಬಗ್ಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಸಿದ್ದರಾಮಯ್ಯ ಅವರಿಗೆ ಜನರಿಂದ ದೂರವಾಗುವ ಯಾವುದೇ ಉದ್ದೇಶವಿಲ್ಲ. ಅವರು ರಾಜಕೀಯವನ್ನು ತ್ಯಜಿಸುವುದಿಲ್ಲ ಬದಲಿಗೆ ಸಾರ್ವಜನಿಕ ಜೀವನದಲ್ಲೇ ಇರುತ್ತಾರೆ. ಜನರ ಹಿತಕ್ಕಾಗಿ ಹೋರಾಡುವುದಾಗಿ ಅವರೇ ಹೇಳಿದ್ದಾರೆ. ಈ ಬಗ್ಗೆ ನಾನೂ ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು.