
ಬಳ್ಳಾರಿ (ಆ.10): ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ ಶಾಸಕರಾದ ಜನಾರ್ದನ ರೆಡ್ಡಿ, ಶ್ರೀರಾಮುಲು ಅವರಿಗೆ ಸಚಿವ ನಾಗೇಂದ್ರ ಅವರ ರಾಜೀನಾಮೆ ಕೇಳಲು ಯಾವ ನೈತಿಕತೆ ಇದೆ? ಬಳ್ಳಾರಿಗೆ ಕುಖ್ಯಾತಿ ತಂದಿರುವ ಅವರಿಗೆ ಮಾನ, ಮರ್ಯಾದೆ ಇದೆಯಾ ಎಂದು ಸಚಿವ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.
ರಾಜೀನಾಮೆ ಕೇಳುವ ನೈತಿಕತೆ ಆದ್ರೂ ಇದೆಯಾ?
ಸಚಿವ ನಾಗೇಂದ್ರ ರಾಜೀನಾಮೆ ನೀಡುವಂತೆ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ನೀಡಿದ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಹತಾಶೆಯಿಂದ ಕೆಳಮಟ್ಟದ ಹೇಳಿಕೆ ನೀಡುವುದು ಸರಿಯಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ನ ಜನಪ್ರಿಯತೆ ಹೆಚ್ಚಾಗುತ್ತಿದೆ. 2028ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಇದನ್ನು ಸಹಿಸಲು ಸಾಧ್ಯವಾಗದೆ ರೆಡ್ಡಿ, ಶ್ರೀರಾಮುಲು ಹಾಗೆ ಮಾತನಾಡುತ್ತಿದ್ದಾರೆ. ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದವರಿಗೆ ರಾಜೀನಾಮೆ ಕೇಳುವ ನೈತಿಕತೆಯಾದರೂ ಎಲ್ಲಿಂದ ಬಂತು ಎಂದು ಕೇಳಿದರು.
ಶ್ರೀರಾಮುಲು ಕೇಂದ್ರದ ವಿರುದ್ಧ ಮಾತಾಡಲಿ:
ನಾಗೇಂದ್ರ ಅವರ ರಾಜೀನಾಮೆ ಕೇಳುವ ಶ್ರೀರಾಮುಲು ಹಾಗೂ ಬಿಜೆಪಿಯವರು ಕೇಂದ್ರದಲ್ಲಿ ಪೊಲೀಸರ ದುರ್ಬಳಕೆ, ವಿದ್ಯಾರ್ಥಿಗಳನ್ನು ನಡೆಸಿಕೊಂಡಿರುವ ರೀತಿ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಲಿ. ಕೇಂದ್ರದ ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡುವಂತೆ ಮೊದಲು ಒತ್ತಾಯಿಸಲಿ ಎಂದು ಸವಾಲು ಹಾಕಿದರು.
ರಾಜ್ಯ ಸರ್ಕಾರದಲ್ಲಿ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲ ಇಲ್ಲ. ಮಹಿಳೆಯರಿಗೂ ಪ್ರಾತಿನಿಧ್ಯ ನೀಡಲಿದೆ. ಎಲ್ಲರಿಗೂ ಸರಿಸಮನಾಗಿ ಅಧಿಕಾರ ಹಂಚಿಕೆ ಮಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡಲಿದೆ ಎಂದು ಖಂಡ್ರೆ ತಿಳಿಸಿದರು.