ಭಾರತದ ಜತೆ ರೈಲ್ವೆ ಸಂಪರ್ಕ: ರಷ್ಯಾ ಪ್ರಸ್ತಾಪ; ಹಿಂದೂ ಮಹಾಸಾಗರಕ್ಕೆ ನೇರ ರೈಲ್ವೆ ಜಾಲ

Author:



ಮಾಸ್ಕೋ: ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಜಲಸಂಧಿಗಳಲ್ಲಿನ ಭದ್ರತಾ ಭೀತಿಯ ಹಿನ್ನೆಲೆಯಲ್ಲಿ, ರಷ್ಯಾದಿಂದ ಹಿಂದೂ ಮಹಾಸಾಗರಕ್ಕೆ ನೇರ ರೈಲ್ವೆ ಸಂಪರ್ಕ ಜಾಲವನ್ನು ನಿರ್ಮಿಸುವ ಅಗತ್ಯವಿದೆ ಎಂದು ರಷ್ಯಾದ ಉಪ ಪ್ರಧಾನಿ ಮರಾತ್ ಖುಸ್ನುಲ್ಲಿನ್ ಪ್ರತಿಪಾದಿಸಿದ್ದಾರೆ.

ಟಾಸ್ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ‘ಬಾಸ್ಫರಸ್ ಮತ್ತು ಹೋರ್ಮುಜ್ ಜಲಸಂಧಿಗಳ ಮೂಲಕ ನಡೆಯುವ ಸರಕು ಸಾಗಣೆಯಲ್ಲಿ ಅಪಾಯಗಳು ಹೆಚ್ಚುತ್ತಿವೆ. ಹೀಗಾಗಿ ರಷ್ಯಾಕ್ಕೆ ಪರ್ಯಾಯ ಮತ್ತು ಸುರಕ್ಷಿತ ಭೂಸಾರಿಗೆ ಮಾರ್ಗಗಳ ತುರ್ತು ಅಗತ್ಯವಿದೆ. ಹೊಸ ರೈಲ್ವೆ ಯೋಜನೆಯ ಭಾಗವಾಗಿ ವಿವಿಧ ದೇಶಗಳ ಮೂಲಕ ಹಾದುಹೋಗುವ ಮಾರ್ಗಗಳನ್ನು ರಷ್ಯಾ ಪರಿಶೀಲಿಸುತ್ತಿದೆ.

ಭಾರತದ ಜೊತೆ ಸಂಪರ್ಕ

ತುರ್ಕ್ಮೆನಿಸ್ತಾನ್, ಇರಾನ್, ಅಫ್ಘಾನಿಸ್ತಾನ್ ಮತ್ತು ಪಾಕಿಸ್ತಾನದ ಮೂಲಕ ಭೂಮಾರ್ಗವಾಗಿ ರೈಲು ಜಾಲ ವಿಸ್ತರಿಸುವ ಪ್ರಸ್ತಾಪಗಳು ಸಕ್ರಿಯವಾಗಿವೆ. ಭಾರತಕ್ಕೆ ಪ್ರವೇಶವನ್ನು ಒದಗಿಸುವ ಯಾವುದೇ ಆಯ್ಕೆಗಳು ಸ್ವೀಕಾರಾರ್ಹ’ ಎಂದು ತಿಳಿಸಿದರು.

ಮಧ್ಯಪ್ರಾಚ್ಯ ಸಂಘರ್ಷವು ಹೋರ್ಮುಜ್ ಮೂಲಕ ಹಡಗು ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ಜಾಗತಿಕ ತೈಲ ವ್ಯಾಪಾರದ ಶೇ.25ರಷ್ಟು ಈ ಜಲಸಂಧಿಯ ಮುಖಾಂತರವೇ ಸಾಗಬೇಕಿದೆ. ಹೀಗಾಗಿ ರಷ್ಯಾಕ್ಕೆ ದಕ್ಷಿಣ ಏಷ್ಯಾ ಮತ್ತು ಭಾರತೀಯ ಮಾರುಕಟ್ಟೆಯನ್ನು ತಲುಪಲು ಹೊಸ ದಾರಿ ಹುಡುಕುವುದು ಅನಿವಾರ್ಯವಾಗಿದೆ.



Movie News