‘ನನ್ನ ಹೆಸರಲ್ಲಿ ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರೆ..’ ಮೀಸಲಾತಿ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ ನಟಿ ಶಿಲ್ಪಾ ಶೆಟ್ಟಿ

Author:



ಮುಂಬೈ (ಜು.28): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಹೆಸರಿನಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಜಾತಿ ಆಧಾರಿತ ಮೀಸಲಾತಿ ಕುರಿತು ವಿವಾದಾತ್ಮಕ ಹಾಗೂ ನಕಲಿ ಹೇಳಿಕೆಯೊಂದು ತೀವ್ರವಾಗಿ ವೈರಲ್ ಬೆನ್ನಲ್ಲೇ, ನಟಿ ಶಿಲ್ಪಾ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೆಸರಿನಲ್ಲಿ ಹರಿದಾಡುತ್ತಿರುವ ಹೇಳಿಕೆಯು ಸಂಪೂರ್ಣವಾಗಿ ಸುಳ್ಳು, ಆಧಾರರಹಿತ ಮತ್ತು ನಕಲಿ ಎಂದು ಸ್ಪಷ್ಟಪಡಿಸಿರುವ ಅವರು, ಇಂತಹ ಗೊಂದಲ ಮೂಡಿಸುವ ಪೋಸ್ಟ್‌ಗಳನ್ನು ಯಾರೂ ನಂಬಬಾರದು ಎಂದು ಅಭಿಮಾನಿಗಳಲ್ಲಿ ಹಾಗೂ ನೆಟ್ಟಿಗರಲ್ಲಿ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಶಿಲ್ಪಾ ಶೆಟ್ಟಿ ಅವರು ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ಪೋಸ್ಟ್ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಆ ಪೋಸ್ಟ್‌ನಲ್ಲಿ ಶಿಲ್ಪಾ ಶೆಟ್ಟಿ ಅವರು ಮೀಸಲಾತಿಯನ್ನು ರದ್ದುಗೊಳಿಸುವ ಪರವಾಗಿದ್ದಾರೆ ಎಂದು ಬಿಂಬಿಸಲು ಯತ್ನಿಸಲಾಗಿತ್ತು. ಆದರೆ, ಈ ಮಾತನ್ನು ಅಲ್ಲಗೆಳೆದಿರುವ ಶಿಲ್ಪಾ ಶೆಟ್ಟಿ, ಇಂತಹ ಯಾವುದೇ ಹೇಳಿಕೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಎಕ್ಸ್‌ನಲ್ಲಿ ಶಿಲ್ಪಾ ಶೆಟ್ಟಿ ಪೋಸ್ಟ್‌

ಎಕ್ಸ್‌ ಹಾಗೂ ಇನ್ಸ್‌ಟಾಗ್ರಾಮ್‌ ಸ್ಟೋರಿಯಲ್ಲಿ ಈ ಬಗ್ಗೆ ಸುದೀರ್ಘ ಪ್ರತಿಕ್ರಿಯೆ ನೀಡಿರುವ ನಟಿ, ‘ನನ್ನ ಹೆಸರಿನಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಸುಳ್ಳು ಹಾಗೂ ವಿವಾದಾತ್ಮಕ ಹೇಳಿಕೆಗಳನ್ನು ಜೋಡಿಸಿ ಪ್ರಚಾರ ಮಾಡಲಾಗುತ್ತಿದೆ. ಇದನ್ನು ಕಂಡು ನನಗೆ ತೀವ್ರ ಆಘಾತವಾಗಿದೆ. ಇದು ಸಂಪೂರ್ಣವಾಗಿ ನಕಲಿ ಹಾಗೂ ದ್ವೇಷಪೂರಿತ ಸುಳ್ಳು ಪ್ರಚಾರ. ದಯವಿಟ್ಟು ಇಂತಹ ಫೇಕ್ ಪೋಸ್ಟ್‌ಗಳು ಹಾಗೂ ವಿಕೃತ ವದಂತಿಗಳನ್ನು ಯಾರೂ ನಂಬಬೇಡಿ,” ಎಂದು ಆಕ್ರೋಶ ಹೊರಹಾಕಿದ್ದಾರೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ ನಕಲಿ ಪೋಸ್ಟ್‌ನಲ್ಲಿ ಶಿಲ್ಪಾ ಶೆಟ್ಟಿ ಅವರು ಜಾತಿ ಆಧಾರಿತ ಮೀಸಲಾತಿ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಬಿಂಬಿಸಲಾಗಿತ್ತು. ಆ ನಕಲಿ ಪೋಸ್ಟ್‌ನಲ್ಲಿ, ‘ಸಾಮಾನ್ಯ ವರ್ಗದ (General Category) ವೈದ್ಯರು ಕೇವಲ ಸಾಮಾನ್ಯ ವರ್ಗದ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಬೇಕು. ಇನ್ನುಳಿದ ಸಮಾಜದ ವೈದ್ಯರು ತಮ್ಮ ತಮ್ಮ ವರ್ಗದ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಬೇಕು. ಇಂತಹ ವ್ಯವಸ್ಥೆ ಜಾರಿಯಾದರೆ ಜನರೇ ಸ್ವತಃ ಮೀಸಲಾತಿಯನ್ನು ರದ್ದುಗೊಳಿಸುವಂತೆ ಆಗ್ರಹಿಸುತ್ತಾರೆ. ಏಕೆಂದರೆ ಪ್ರತಿಭೆ/ಅರ್ಹತೆಯು (Quality) ಮೀಸಲಾತಿಯಿಂದ ಸಿಗಲು ಸಾಧ್ಯವಿಲ್ಲ” ಎಂಬ ಸಾಲುಗಳನ್ನು ಬರೆಯಲಾಗಿತ್ತು.

ಈ ಸೂಕ್ಷ್ಮ ಹಾಗೂ ಆಕ್ಷೇಪಾರ್ಹ ಸಾಲುಗಳನ್ನು ಶಿಲ್ಪಾ ಶೆಟ್ಟಿ ಅವರ ಹೆಸರಿನಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡಲಾಗಿತ್ತು. ಸಾಮಾಜಿಕವಾಗಿ ತೀವ್ರ ಸೂಕ್ಷ್ಮವಾಗಿರುವ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದ್ದರಿಂದ ಈ ಪೋಸ್ಟ್ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿ, ಹಲವರ ತೀವ್ರ ಆಕ್ರೋಶ ಹಾಗೂ ಆಕ್ಷೇಪಾರ್ಹ ಪ್ರತಿಕ್ರಿಯೆಗಳಿಗೆ ಕಾರಣವಾಗಿತ್ತು.

ಹೆಚ್ಚುತ್ತಿರುವ ‘ಫೇಕ್ ನ್ಯೂಸ್’ ಪಿಡುಗು

ನಟಿ ಶಿಲ್ಪಾ ಶೆಟ್ಟಿ ಅವರು ತಕ್ಷಣವೇ ನೀಡಿದ ಈ ಸ್ಪಷ್ಟನೆಯಿಂದಾಗಿ, ಪ್ರಸಿದ್ಧ ವ್ಯಕ್ತಿಗಳ (Celebrities) ಹೆಸರನ್ನು ಬಳಸಿ ಸೋಶಿಯಲ್‌ ಮೀಡಿಯಾದಲ್ಲಿ ಸುಳ್ಳು ಹಾಗೂ ನಕಲಿ ವದಂತಿಗಳನ್ನು ಹಬ್ಬಿಸುವ ಜಾಲ ಎಷ್ಟು ಅಪಾಯಕಾರಿಯಾಗಿ ಬೆಳೆದಿದೆ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಅಥವಾ ನಂಬುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಎಷ್ಟು ಅಗತ್ಯ ಎಂಬುದನ್ನು ಈ ಘಟನೆ ಎತ್ತಿ ತೋರಿಸಿದೆ.



Movie News