
ಬೆಂಗಳೂರು(ಜು.28): ರಾಜಧಾನಿಯ ಬಹುನಿರೀಕ್ಷಿತ ‘ನಮ್ಮ ಮೆಟ್ರೋ’ 3ನೇ ಹಂತದ (Phase 3) ಯೋಜನೆ ಜಾರಿಗಾಗಿ ಒಟ್ಟು 1.33 ಲಕ್ಷ ಚದರ ಮೀಟರ್ ವಿಸ್ತೀರ್ಣದ 1,087 ಕಟ್ಟಡ ಹಾಗೂ ಆಸ್ತಿಗಳನ್ನು ಪೂರ್ಣ ಅಥವಾ ಭಾಗಶಃ ನೆಲಸಮಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಯೋಜನೆ ರೂಪಿಸಿದೆ. ಮೆಟ್ರೋ 3ನೇ ಹಂತದ ಯೋಜನೆಯು ಒಟ್ಟು 31 ಎಲಿವೇಟೆಡ್ (ಮೇಲ್ಸೇತುವೆ) ನಿಲ್ದಾಣಗಳೊಂದಿಗೆ 44.65 ಕಿಲೋಮೀಟರ್ ಉದ್ದದ ಮಾರ್ಗವನ್ನು ಒಳಗೊಂಡಿರಲಿದೆ. ಈ ಯೋಜನೆಯಲ್ಲಿ ಎರಡು ಕಾರಿಡಾರ್ಗಳಿರಲಿವೆ.
ಕಾರಿಡಾರ್ 1: ಜೆ.ಪಿ. ನಗರ 4ನೇ ಹಂತದಿಂದ ಕೆಂಪಾಪುರಸಂಖ್ಯೆಯ ಹೊರವರ್ತುಲ ರಸ್ತೆಯ (ORR) ಪಶ್ಚಿಮ ಭಾಗದ ಮಾರ್ಗದಲ್ಲಿ 22 ನಿಲ್ದಾಣಗಳೊಂದಿಗೆ 32.15 ಕಿ.ಮೀ ಉದ್ದವಿರಲಿದೆ.
ಕಾರಿಡಾರ್ 2: ಮಾಗಡಿ ರಸ್ತೆಯ ಹೊಸಹಳ್ಳಿಯಿಂದ ಕಡಬಗೆರೆಯವರೆಗೆ 9 ನಿಲ್ದಾಣಗಳೊಂದಿಗೆ 12.5 ಕಿ.ಮೀ ಉದ್ದವಿರಲಿದೆ.
ಟೆಂಡರ್ ತಡೆ ಹಾಗೂ ತಜ್ಞರ ಸೇವೆಗೆ ಬಿಡ್ ಆಹ್ವಾನ
ಈ ವರ್ಷದ ಜನವರಿಯಲ್ಲಿ ಬಿಎಂಆರ್ಸಿಎಲ್ 3ನೇ ಹಂತದ ಕೆಲ ಪ್ಯಾಕೇಜ್ಗಳಿಗೆ ಸಿವಿಲ್ ನಿರ್ಮಾಣ ಟೆಂಡರ್ ಕರೆದಿತ್ತು. ಆದರೆ, 3ನೇ ಹಂತದ ಮಾರ್ಗದಲ್ಲಿ ₹9,692.33 ಕೋಟಿ ವೆಚ್ಚದಲ್ಲಿ 37.12 ಕಿ.ಮೀ ಉದ್ದದ ಡಬಲ್-ಡೆಕ್ಕರ್ (ದ್ವಿಪಥ) ಫ್ಲೈಓವರ್ ನಿರ್ಮಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಪ್ರಕ್ರಿಯೆಯನ್ನು ಸದ್ಯ ತಡೆಹಿಡಿಯಲಾಗಿದೆ.
ಇದರ ನಡುವೆಯೇ, ಬಿಎಂಆರ್ಸಿಎಲ್ ಸೋಮವಾರ ಒಟ್ಟು ₹5.4 ಕೋಟಿ ವೆಚ್ಚದಲ್ಲಿ ಮೂರು ಪ್ಯಾಕೇಜ್ಗಳ ವ್ಯಾಪ್ತಿಯಲ್ಲಿ ಬರುವ ಕಟ್ಟಡಗಳ ಸ್ಥಿತಿಗತಿ ಅಧ್ಯಯನ, ರಚನಾತ್ಮಕ ವಿಶ್ಲೇಷಣೆ (Structural analysis), ವರದಿ ಸಲ್ಲಿಕೆ ಹಾಗೂ ಕಟ್ಟಡಗಳ ಭಾಗಶಃ ಅಥವಾ ಪೂರ್ಣ ನೆಲಸಮ ಉಸ್ತುವಾರಿ ವಹಿಸಲು ಕನ್ಸಲ್ಟೆನ್ಸಿ (ಸಲಹಾ) ಸೇವೆಗಳಿಗೆ ಬಿಡ್ ಆಹ್ವಾನಿಸಿದೆ.
ನೆಲಸಮಗೊಳ್ಳಲಿರುವ ಆಸ್ತಿಗಳ ಸಂಪೂರ್ಣ ವಿವರ
ಹೊಸಹಳ್ಳಿಯಿಂದ ಕಡಬಗೆರೆ ನಿಲ್ದಾಣದವರೆಗೆ (11.3 ಕಿ.ಮೀ): ಈ ಮಾರ್ಗದಲ್ಲಿ ಒಟ್ಟು 42,665 ಚದರ ಮೀಟರ್ ವಿಸ್ತೀರ್ಣದ 342 ಕಟ್ಟಡ/ರಚನೆಗಳನ್ನು ಸ್ವಾಧೀನಪಡಿಸಿಕೊಂಡು ನೆಲಸಮಗೊಳಿಸಲು ಪ್ರಸ್ತಾಪಿಸಲಾಗಿದೆ.
ಮೈಸೂರು ರಸ್ತೆ ನಿಲ್ದಾಣದಿಂದ ಕೊಟ್ಟಿಗೆಪಾಳ್ಯ ಜಂಕ್ಷನ್ (6.22 ಕಿ.ಮೀ) ಮತ್ತು ಕೊಟ್ಟಿಗೆಪಾಳ್ಯ ಜಂಕ್ಷನ್ನಿಂದ ಸುಂಕದಕಟ್ಟೆ ಡಿಪೋವರೆಗೆ (1.64 ಕಿ.ಮೀ): ಈ ಭಾಗದಲ್ಲಿ ಒಟ್ಟು 46,145 ಚದರ ಮೀಟರ್ ವಿಸ್ತೀರ್ಣದ 339 ಕಟ್ಟಡಗಳನ್ನು ಸ್ವಾಧೀನಪಡಿಸಿಕೊಂಡು ನೆಲಸಮಗೊಳಿಸಲು ಯೋಜಿಸಲಾಗಿದೆ.
ಸುಮ್ಮನಹಳ್ಳಿ ನಿಲ್ದಾಣದಿಂದ ಕೆಂಪಾಪುರ ನಿಲ್ದಾಣದವರೆಗೆ (13.17 ಕಿ.ಮೀ): ಇಲ್ಲಿ ಒಟ್ಟು 45,142 ಚದರ ಮೀಟರ್ ವಿಸ್ತೀರ್ಣದ 406 ಕಟ್ಟಡ/ರಚನೆಗಳನ್ನು ವಶಪಡಿಸಿಕೊಂಡು ನೆಲಸಮಗೊಳಿಸಲು ನಿರ್ಧರಿಸಲಾಗಿದೆ.
ಮೂರು ಮಾದರಿಯ ಕಟ್ಟಡಗಳ ತೆರವು
ಪ್ರಮುಖವಾಗಿ ಮೂರು ರೀತಿಯ ಆಸ್ತಿಗಳನ್ನು ನೆಲಸಮಗೊಳಿಸಲಾಗುತ್ತದೆ. ಆರ್ಸಿಸಿ ಫ್ರೇಮ್ಡ್ ಹಾಗೂ ಆರ್ಸಿಸಿ ಛಾವಣಿ ಹೊಂದಿರುವ ಕಟ್ಟಡಗಳು, ಲೋಡ್-ಬೇರಿಂಗ್ ಗೋಡೆ ಹಾಗೂ ಆರ್ಸಿಸಿ ಛಾವಣಿ ಹೊಂದಿರುವ ಕಟ್ಟಡಗಳು ಮತ್ತು ಇತರೆ ತಾತ್ಕಾಲಿಕ ರಚನೆಗಳು. ಬಿಎಂಆರ್ಸಿಎಲ್ ಮಾಹಿತಿ ಪ್ರಕಾರ, ಈ ಪೈಕಿ ಕೆಲವು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಈಗಾಗಲೇ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ.